ನಾಟ್ಯ ಭಂಗಿಗಳು, ಚಲನೆಗಳು – ಯತೊ ಹಸ್ತಃ ತತೋ ದೃಷ್ಟಿಃ


ಯತೊ ಹಸ್ತಃ ತತೋ ದೃಷ್ಟಿಃ
ತೋ ದೃಷ್ಟಿಃ ತತೋ ಮನಃ
ಯತೋ ಮನೋ ತತೋ ಭಾವಃ
ಯತೋ ಭಾವಃ ತತೋ ರಸಃ ||

ಕೈಗಳು ನಡೆದಲ್ಲಿ ಕಣ್ಣಿನ ದೃಷ್ಟಿ, ದೃಷ್ಟಿ ಒಡನೆ ಮನಸ್ಸು, ಭಾವ, ರಸಗಳು ಪೂರಕವಾಗಿರಬೇಕು ಎಂಬುದೇ ಇದರ ಮೂಲಾರ್ಥ.

ಅಡವುಗಳಿಗಿರುವ ೪ ಲಕ್ಷಣಗಳು :

(೧) ಸ್ಥಾನಕ : ಆರಂಭದಲ್ಲಿ ಮಾಡುವ ಅಥವಾ ನಿಲ್ಲುವ ಭಂಗಿ
(೨) ನೃತ್ಯ   : ಆಯಾ ಅಡವುಗಳಿಗೆ ತಕ್ಕಂತೆ ನೃತ್ಯ ಹಸ್ತಗಳಿವೆ. ಅಲಂಕಾರಕ್ಕಾಗಿ ನೃತ್ತಹಸ್ತಗಳನ್ನು ಉಪಯೋಗಿಸುತ್ತಾರೆ, ಆದರೆ ಇವುಗಳಿಗೆ ನಿಜವಾದ ಅರ್ಥವಿಲ್ಲ.
(೩) ಚಾರಿ    : ಅಡವುಗಳನ್ನು ಮಾಡುವಾಗ ಬೇಕಾಗುವ ಕಾಲ್ಚಲನೆ ಮತ್ತು ಕೈಗಳ ಚಲನೆಗಳು
(೪) ಹಸ್ತಕ್ಷೇತ್ರ  : ಅಡವುಗಳನ್ನು ಮಾಡುವಾಗ ಪ್ರಾರಂಭದಲ್ಲಿ ಕೈಗಳನ್ನು ಇಡಬೇಕಾದ ಜಾಗ, ಚಲನೆಯಾದ ಬಳಿಕ ಹಸ್ತಗಳಿರಬೇಕಾದ ಜಾಗ; ಈ ಗಾಗಗಳು ಮೈಗೆ ಸಂಬಂಧ ಪಟ್ಟು ವಿಶಿಷ್ಟ ದೂರ, ಕೋನಗಳಲ್ಲಿ ಇರಬೇಕು.

ಹುಬ್ಬಿನ ಚಲನೆಗಳು :

(೧) ಸಹಜ : ಯಾವ ಬದಲಾವಣೆಯೂ ಇಲ್ಲದೆ ಇರುವ ಹುಬ್ಬು
(೨) ಪತಿತ : ಕೆಳಗೆ ಬಂದ ಹುಬ್ಬು ಉಪಯೋಗ: ಅಸೂಯೆ ವ್ಯಕ್ತಪಡಿಸುವುದು
(೩) ಉತ್‍ಕ್ಶಿಪ್ತ : ಮೇಲೆ ಬಂದ ಹುಬ್ಬು ಉಪಯೋಗ: ವಿಸ್ಮಯ, ಸ್ತ್ರೀಕೋಪ
(೪) ರೇಚಿತ : ಒಂದು ಹುಬ್ಬು ಮೇಲೇರುವುದು
(೫) ಕುಂಚಿತ : ಹುಬ್ಬು ತುಸು ಬಾಗುವುದು ಉಪಯೋಗ: ಪ್ರಣಯ ಚೇಷ್ಟೆ
(೬) ಬ್ರುಕುಟಿ : ಹುಬ್ಬುಗಂಟಿಕ್ಕುವುದು  ಉಪಯೋಗ : ಕೋಪ
(೭) ಚತುಅರ : ಹುಬ್ಬು ಸಡಿಲಬಿಡುವುದು ಉಪಯೋಗ : ಅನುರಾಗ

ಕಣ್ಣಿನ ಚಲನೆಗಳು :

(೧) ಸಮ : ಎದುರಿಗೆ ನೋಡುವುದು
(೨) ಅನುಬೃತ್ತ : ಮೇಲೆ ಕೆಳಗೆ ನೋಡುವುದು ಉಪಯೋಗ : ಕೋಪ
(೩) ಸಾಚಿ : ಒಂದು ಬದಿಗೆ ನೋಡುವುದು  ಉಪಯೋಗ : ನೆನಪಿಸಿಕೊಳ್ಳುವುದು
(೪) ಉಲ್ಲೋಕಿತ : ಮೇಲೆ ನೋಡುವುದು
(೫) ಅವಲೋಕಿತ : ಕೆಳಗೆ ನೋಡುವುದು
(೬) ಆಲೋಕಿತ : ತೆರೆದು ಸುತ್ತ ತಿರುಗಿಸುವುದು
(೭) ಪ್ರಲೋಕಿತ : ಎರಡೂ ಬದಿಗೆ ನೋಡುವುದು
(೮) ನಿಮೀಲಿತ : ಅರೆಗಣ್ಣು ಮುಚ್ಚುವುದು ಉಪಯೋಗ : ಧ್ಯಾನ

Advertisements

ಭರತನಾಟ್ಯದ ಮೊದಲ ಪಾಠ – ಅಡವುಗಳು


ಅಂಗ, ಉಪಾಂಗ,ಪ್ರತ್ಯಾಂಗ ಇವುಗಳ ಚಲನೆಗಳನ್ನು ’ಅಡವುಗಳು’ ಎಂದು ಕರೆಯುತ್ತಾರೆ. ಯಾವುದೇ ಭಾಷೆಗೆ ಅಕ್ಷರಮಾಲೆ ಇದ್ದಂತೆ ಭರತನಾಟ್ಯದಲ್ಲಿ ಪ್ರಪ್ರಥಮ ಪಾಠವೆಂದರೆ ’ಅಡವುಗಳು’.

ಹಲವು ಪ್ರಕಾರದ ಅಡವುಗಳಿವೆ. ಕೆಲವನ್ನು ಇಲ್ಲಿ ಕೆಳಗೆ ಚಿಕ್ಕದಾಗಿ ವಿವರಿಸಿದ್ದೇನೆ –

(೧) ತಟ್ಟಡವು – ಅರೆಮಂಡಿಯಲ್ಲಿ ನಿಂತು ಪಾದವನ್ನು ತೈಯ್ಯಾತೈ ಎಂಬ ಶಬ್ದವನ್ನು ಬಳಸಿ ೧, ೨ ಮತ್ತು ೩ ನೇ ಕಾಲದಲ್ಲಿ ಗಟ್ಟಿಯಾಗಿ ತಟ್ಟುವುದು
(೨) ಮೆಟ್ಟಡವು – ಕಾಲು ಬೆರಳುಗಳನ್ನು ಭೂಮಿಯ ಮೇಲೆ ಇಟ್ಟು ಆನಂತರ ದಿತ್ತೈದಿತ್ತೈ ಎಂಬ ಶಬ್ದಗಳಿಂದ ಹಿಮ್ಮಡಿಯನ್ನು ಬಡಿಯುವುದು
(೩) ನಾಟಡವು – ಮೊಣಕಾಲನ್ನು ಹಿಮ್ಮಡಿಯನ್ನು ಮುಂದಕ್ಕೆ ನಾಟಿ ಕಾಲ್ಬೆರಳುಗಳನ್ನು ಮೇಲಕ್ಕೆತ್ತುವುದು
(೪) ಕಟ್ಟಡವು – ಒಂದು ಪಾದದ ಹಿಂದೆ ಇನ್ನೊಂದು ಕಾಲಿನ ಬೆರಳುಗಳನ್ನು ಅಡ್ಡವಾಗಿ ಇಡುವುದು
(೫) ಎಗರುತಟ್ಟು – ಎರಡು ಕಾಲುಗಳ ಬೆರಳುಗಳಿಂದ ಎಗರಿ ಆಮೇಲೆ ಒಂದು ಕಾಲನ್ನು ತಟ್ಟುವುದು (ತತೈತ್ತಾಹ)
(೬) ಎಗರುಮೆಟ್ಟು – ಎಗರಿ ಆಮೇಲೆ ಹಿಮ್ಮಡಿಯನ್ನು ಬಲವಾಗಿ ಭೂಮಿಗೆ ತಟ್ಟುವುದು (ತೈಯ ತೈಹಿ)
(೭) ತಟ್ಟುಮೆಟ್ಟು – ಬಲಗಾಲನ್ನು ನೆಲದ ಮೇಲೆ ತಟ್ಟಿ ಎಡಕಾಲಿನ ಬೆರಳುಗಳನ್ನು ಭೂಮಿಯಲ್ಲಿಟ್ಟು ಎಡಕಾಲಿನ ಹಿಮ್ಮಡಿಯನ್ನೆತ್ತಿ, ಭೂಮಿಗೆ ತಟ್ಟುವುದು (ತಕಧಿಮಿ, ತಕಿಟ)
(೮) ಮುಕ್ತಾಯ – ಯಾವುದೇ ಜತ್ತಿ ಅಥವಾ ಒಂದು ತೀರ್ಮಾನದ ಕೊನೆಯಲ್ಲಿ ಉಪಯೋಗಿಸುವ ಅಡವು
(೯) ಜಾರಡವು – ಕಾಲುಗಳನ್ನು ನೇರವಾಗಿಟ್ತು ಜಾರಿಸಿ ಪಾದಗಳನ್ನು ಜೋಡಿಸಿ ಬೆರಳುಗಳನ್ನೆತ್ತಿ ಆನಂತರ ಎರಡು ಪಾದಗಳನ್ನು ಜೋಡಿಸಿ ಬೆರಳುಗಳನ್ನೆತ್ತಿ ತಟ್ಟುವುದು
(೧೦) ಜಾತಿಅಡವು – ಭರತನಾಟ್ಯದ ಎಲ್ಲಾ ಅಡವುಗಳನ್ನು ತ್ರಿಶ್ರ, ಚತುರಶ್ರ, ಖಂಡ ಅನ್ದ್ ಸಂಕೀರ್ಣ – ಈ ಜಾತಿಗಳಲ್ಲಿ ಮಾಡುವುದೇ ಜಾತಿ ಅಡವು
(೧೧) ತಾಂಡವಾಡವು – ಒಂದು ಕಾಲನ್ನು ಇನ್ನೊಂದರಿಂದ ಆದಷ್ಟು ದೂರ ಅಥವಾ ಅದರ ಪಕ್ಕಕ್ಕೆ ಅಥವಾ ಮುಂದಕ್ಕೆ ಚಾಚಿ ಇಡುವುದು.
(೧೨) ಮಂಡಿಅಡವು – ಅರೆಮಂಡಿಯಲ್ಲಿ ಕೆಳಗೆ ನೆಲದಲ್ಲಿ ಕಾಲ್ಬೆರಳುಗಳ ಮೇಲೆ ಕುಳಿತುಕೊಂಡು ಮಂಡಿಗಳನ್ನು ಚೆನ್ನಾಗಿ ಪಕ್ಕಕ್ಕೆ ಚಾಚಿ ಒಂದು ಮಂಡಿಯನ್ನು ಭೂಮಿಗೆ ತಾಳಕ್ಕನುಗುಣವಾಗಿ ತಗಲಿಸುವುದು
(೧೩) ಸಾರಿಕಲಡವು – ಅರೆಮಂಡಿಯಲ್ಲಿ ಕೆಳಕ್ಕೆ ನೆಲದಲ್ಲಿ ಕಾಲ್ಬೆರಳುಗಳ ಮೇಲೆ ಕುಳಿತುಕೊಂಡು ಮಂಡಿಗಳನ್ನು ಚೆನ್ನಾಗಿ ಪಕ್ಕಕ್ಕೆ ಚಾಚಿ ಒಂದು ಮಂಡಿಯನ್ನು ಇನ್ನೊಂದು ಮಂಡಿಯಿಂದ ದೂರಕ್ಕೆ ಚಾಚುವುದು
(೧೪) ಅರಧಿಅಡವು – ಇದನ್ನು ಸಾಧಾರಣವಾಗಿ ವರ್ಣಗಳಲ್ಲಿ,ತಿಲ್ಲಾನಗಳಲ್ಲಿ ಮತ್ತು ಕೆಲವು ವರ್ಣಾತ್ಮಕ ಪದಗಳಲ್ಲಿ ಉಪಯೋಗಿಸುತ್ತಾರೆ. ಆದಿತಾಳದಲ್ಲಿ ಸಮದಿಂದ ಅರ್ಧ ಆವೃತ್ತದವರೆಗೂ ಅಥವಾ ಅರ್ಧ ಆವೃತ್ತದಿಂದ ಮುಂದೆ ಸಮಕ್ಕೂ ವಿವಿಧ ತಾಳ ಮಾದರಿಯಿಂದ ಮಾಡುವುದೇ ಅರಧಿಅಡವು.
(೧೫) ಮೈಅಡವು – ಅರ್ಧ ಮಂಡಿಯಲ್ಲಿ ಮೈಯನ್ನು ಮಾತ್ರ ಸೊಂಟದಿಂದ ಬಾಗಿಸಿ ಮೈಯ ಭಾಗವನ್ನು ಚಲಿಸುವುದು
(೧೬) ನಡೆಅಡವು – ಭರತನಾಟ್ಯದಲ್ಲಿ ನಡೆಯುವುದಕ್ಕೆ ಒಂದು ವಿಶಿಷ್ಟ ಕ್ರಮವಿದೆ. ಸಿಂಹಗತಿ, ಹಂಸಗತಿ,ಮಯೂರಗತಿ,ಹರಿಣಿಗತಿ ಮುಂತಾದವು.
(೧೭) ಭ್ರಾಮರಿ – ಒಂದು ಕಾಲನ್ನು ಎತ್ತಿ ಇನ್ನೊಂದು ಕಾಲಿನ ಮೇಲೆ ಗೋಲಾಕಾರವಾಗಿ ತಿರುಗುವುದು.
(೧೮) ರಂಗಾಕ್ರಮಣ – ಎರಡು ಕಾಲುಗಳ ಮೇಲೆ ಎಗರಿ ಆನಂತರ ಒಂದು ಕಾಲನ್ನು ತಟ್ಟುತ್ತಾ ಅದರ ಹಿಂದೆ ಇನ್ನೊಂದು ಕಾಲಿನಿಂದ ಮೆಟ್ಟುತ್ತಾ ರಂಗದ ಒಂದು ಪಕ್ಕದಿಂದ ಎನ್ನೊಂದು ಬದಿಗೆ ಚಲಿಸುವುದು

ಭರತನಾಟ್ಯಂ – ಪಂಚಮವೇದದ ಒಂದು ಕಿರು ಪರಿಚಯ


ಭಖಾರೋ ಭಾವ ಸಂಯುಕ್ತೋ
ರೇ ಪೋ ರಾಗೇನ ಸಂಶ್ರಿತಾಃ
ತಕಾರ ಸ್ತಾಳ ಇತ್ಯಾಹುಃ
ಭರತಾರ್ಥ ವಿಚಕ್ಷಣಾ ||

ಭರತ ಎಂಬ ನಾಮಪದಕ್ಕೆ ಅನೇಕ ನಿರ್ಣಯಗಳಿವೆ. ನಾಟ್ಯಶಾಸ್ತ್ರದ ಕರ್ತೃ ಸಂಸ್ಕೃತದಲ್ಲಿರುವ ಈ ಕೃತಿಯಲ್ಲಿ  ಮುಖ್ಯವಾಗಿ ನಾಟ್ಯದ ಮತ್ತು ಸಂಗೀತದ ಕುರಿತಾಗಿ ವಿಶದವಾದ ವಿವರಣೆ ಇರುವುದು.

ನಾಟ್ಯಶಾಸ್ತ್ರವು ತಿಳಿಸುವಂತೆ ಇಂದ್ರಾದಿ ದೇವತೆಗಳು ತಮ್ಮ ಬಿಡುವು ಸಮಯದ ಕಾಲಕ್ಷೇಪ ಮಾಡಲು ಒಂದು ಕಲೆಯನ್ನು ಸೃಷ್ಟಿಸಬೇಕೆಂದು ಬ್ರಹ್ಮನನ್ನು ಪ್ರಾರ್ಥಿಸಿದರಂತೆ. ಬ್ರಹ್ಮನು ಅವರ ಕೋರಿಕೆಯಂತೆ ಋಗ್ವೇದದಿಂದ ಶಬ್ದಗಳನ್ನು, ಸಾಮವೇದದಿಂದ ಸಂಗೀತವನ್ನೂ, ಯಜುರ್ವೇದದಿಂದ ಅಭಿನಯವನ್ನೂ, ಅಥರ್ವಣವೇದದಿಂದ ರಸವನ್ನೂ ಆರಿಸಿ ನಾಟ್ಯವೇದವೆಂಬ ಐದನೆಯ ವೇದವನ್ನು (ಪಂಚಮವೇದ) ಸೃಷ್ಟಿಸಿ ತನ್ನ ಮಗನಾದ ಭರತ ಮುನಿಗೆ ದಯಪಾಲಿಸಿದನು.ಭರತನು ಇದನ್ನು ಶಾಸ್ತ್ರರೂಪದಲ್ಲಿ ಬರೆದು ತನ್ನ ನೂರುಮಕ್ಕಳಿಗೆ ಓದಿಸಿದನು.
ಭರತನಿಂದ ಈ ವಿದ್ಯೆ ಕಲಿತ ಗಂಧರ್ವ ಅಪ್ಸರೆಯರು ಶಿವ ಪರಮಾತ್ಮನ ಮುಂದೆ ನಟಿಸಿದಾಗ ಸಂತುಷ್ಟಗೊಡ ಶಿವನು ತನ್ನ ಗಣಗಳಿಗೆ ಕಲಿಸುವ ಜವಾಬ್ದಾರಿಯನ್ನು ಭರತ ಮುನಿಗೆ ವಹಿಸಿದನು. ಪಾರ್ವತಿದೇವಿಯಿಂದ ’ಲಾಸ್ಯ ನೃತ್ಯ’ದ ಶಿಕ್ಷಣವನ್ನು ಕೂಡಾ ಭರತಮುನಿಯು ಪಡೆದು, ಈ ಮೂಲಕವಾಗಿ ’ಭರತನಾಟ್ಯ’ ಭರತಖಂಡಕ್ಕೆ ಪಸರಿಸಿತು ಎಂಬ ಪ್ರತೀತಿಯಿದೆ.

೧೯ನೇ ಶತಮಾನದ ಆರಂಭದಲ್ಲಿ ಸುಬ್ಬರಾವ್ ನಟುವನಾರ್ ಅವರ ನಾಲ್ವರು ಮಕ್ಕಳಾದ ’ಪಂದನಲ್ಲೂರು ಸಹೋದರ’ರೆನಿಸಿಕೊಂಡ ಚೆನ್ನಯ್ಯ,ಪೊನ್ನಯ್ಯ,ಶಿವಾನಂದ ಮತ್ತು ವಡಿವೇಲು ಇವರುಗಳು ಇಂದಿನ ಭರತನಾಟ್ಯಕ್ಕೆ ಅಲರಿಪು, ಜತಿಸ್ವರ, ಶಬ್ದಂ, ಪದವರ್ಣ, ಜಾವಳಿ, ತಿಲ್ಲಾನ ಮೊದಲಾದವುಗಳನ್ನು ಸಂಯೋಜಿಸುವುದಕ್ಕೆ ಕಾರಣರಾದರು.